ರಿವರ್ಸ್, ಡಬ್ಲ್ಯು ಎಚ್ ಆರ್
1864-1922. ಪ್ರಾಯೋಗಿಕ ಮನೋವಿಜ್ಞಾನ ಹಾಗೂ ಮಾನವಶಾಸ್ತ್ರ ಎರಡೂ ಕ್ಷೇತ್ರಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ಬ್ರಿಟಿಷ್ ಮಾನವಶಾಸ್ತ್ರಜ್ಞ ಹಾಗೂ ವೈದ್ಯಕೀಯ ಮನೋವಿಜ್ಞಾನಿ. ಮಾನವಶಾಸ್ತ್ರದಲ್ಲಿ ಆಧುನಿಕ ರಕ್ತಸಂಬಂಧ (ಕಿನ್‍ಷಿಪ್) ಶಬ್ದಕೋಶಕ್ಕೆ ನೆಲಗಟ್ಟು ಹಾಕಿದವನು. ಈತ 1864 ಮಾರ್ಚ್ 12ರಂದು ಕೆಂಟ್‍ನ ಚೌತಂ ಸಮೀಪದ ಲ್ಯುಟನ್‍ನಲ್ಲಿ ಜನಿಸಿದ. ಲಂಡನ್ನಿನ ಟೋನ್ ಬ್ರಿಜ್ ಶಾಲೆ ಹಾಗೂ ಸೇಂಟ್ ಬಾರ್ಥೊಲೋಮಿಯೋ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ ಪದವಿಗಳಿಸಿದ. ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‍ಗೆ ಫೆಲೋ ಆಗಿ ಆಯ್ಕೆಯಾಗಿ ಗೇಸ್ ಆಸ್ಪತ್ರೆಯಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಅಧ್ಯಾಪಕನಾದ. ಕೆಲಕಾಲಾನಂತರ, ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ, ಅಲ್ಲಿ ಸಿ.ಎಸ್. ಮೇಯರ್ಸ್ ಅವರ ಜೊತೆಗೂಡಿ ಪ್ರಾಯೋಗಿಕ ಮನೋವಿಜ್ಞಾನ ಶಾಖೆಯನ್ನು ಹುಟ್ಟು ಹಾಕಿದ. ಮಾದಕ ದ್ರವ್ಯಗಳ ಪ್ರಭಾವ, ಮಾನಸಿಕ ಆಯಾಸ-ಈ ವಿಷಯಗಳ ಬಗ್ಗೆ ಅಧ್ಯಯನ, ಸಂಶೋಧನೆ ಕೈಗೊಂಡು ಮನೋವಿಜ್ಞಾನಿಯಾಗಿ ಖ್ಯಾತಿಗಳಿಸಿದ. 1902ರಲ್ಲಿ ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ. 1898ರ ಕೊನೆಯ ವೇಳೆಯಲ್ಲಿ ಎ.ಸಿ. ಹಡ್ಡನ್, ಸಿ.ಎಸ್. ಮೇಯರ್ಸ್, ಡಬ್ಲ್ಯು. ಮ್ಯಾಕ್‍ಡಗಾಲ್ ಎಂಬ ವಿದ್ವಾಂಸರುಗಳೊಡನೆ ಕೇಂಬ್ರಿಜ್ ಪರಿಶೋಧನೆಯಲ್ಲಿ (ಟೊರೆಸ್‍ಸ್ಟ್ರೇಟ್ ಪರಿಶೋಧನೆ) ಭಾಗಿಯಾಗಿ ಮಾನವಶಾಸ್ತ್ರ ವಿಷಯದಲ್ಲಿ ಆಸಕ್ತಿ ತಾಳಿದ; ಅನೇಕ ಕಡೆಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಅಧ್ಯಯನ ನಡೆಸಿದ. 1901-1902ರಲ್ಲಿ ಭಾರತದ ನೀಲಗಿರಿಯ ತೋಡ ಜನರನ್ನು ಕುರಿತು ಅಧ್ಯಯನ ಕೈಗೊಂಡ. 1908 ಮತ್ತು 1914ರಲ್ಲಿ ಅನೇಕ ಬಾರಿ ಮಲಿನೇಷ್ಯಕ್ಕೆ ಹೋಗಿ ಮಲಿನೇಷ್ಯನರ ಕುರಿತು ಮಾನವಶಾಸ್ತ್ರೀಯ ಕ್ಷೇತ್ರಕಾರ್ಯ ಕೈಗೊಂಡ. ಮಲಿನೇಷ್ಯನರ ಸಂವೇದನಾ ಕ್ರಿಯೆಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ನಡೆಸಿದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಈತ ಮನೋರೋಗತಜ್ಞನಾಗಿ ಇಂಗ್ಲೆಂಡ್ ಪರ ಸೇವೆ ಸಲ್ಲಿಸಿದ. ಈ ಸಂದರ್ಭದಲ್ಲಿ ಸಮರ ಮನೋಬೇನೆ ಕುರಿತು ಅನೇಕ ಮಹತ್ವದ ಸಂಶೋಧನೆಗಳನ್ನು ಪ್ರಕಟಪಡಿಸಿದ.

ಮಾನವಶಾಸ್ತ್ರಕ್ಕೆ ಸಂಬಂಧಿಸಿದಂತೆ ಈತ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾನೆ. ದಿ ತೋಡಾಸ್ (1906), ಹಿಸ್ಟರಿ ಆಫ್ ಮಲಿನೇಷ್ಯನ್ ಸೊಸೈಟಿ (ಎರಡು ಸಂಪುಟಗಳು, 1914), ಕಿನ್‍ಷಿಪ್ ಅಂಡ್ ಸೋಷಿಯಲ್ ಆರ್ಗನೈಸೇಷನ್ (1914), ಬ್ಯಾಂಕ್ಸ್‍ಐಲ್ಯಾಂಡರ್ಸ್ (1914), ಮೆಡಿಸಿನ್, ಮ್ಯಾಜಿಕ್ ಅಂಡ್ ರಿಲಿಜನ್ (1924)-ಇವು ಇವನ ಮುಖ್ಯ ಕೃತಿಗಳು.
ದಿ ಇನ್‍ಫ್ಲುಯೆನ್ಸ್ ಆಫ್ ಆಲ್ಕೊಹಾಲ್ ಅಂಡ್ ಅದರ್ ಡ್ರಗ್ಸ್ ಅನ್ ಫೆಟೀಗ್ (1908), ಇನ್‍ಸ್ಟ್‍ಂಕ್ಟ್ ಅಂಡ್ ಅನ್‍ಕಾನ್‍ಷಿಯಸ್ (1920), ಕಾನ್‍ಫ್ಲಿಕ್ಟ್ಸ್ ಅಂಡ್ ಡ್ರೀಮ್ (1923), ಸೈಕಾಲಜಿ ಅಂಡ್ ಎಥ್ನಾಲಜಿ (1926), ಸೈಕಾಲಜಿ ಅಂಡ್ ಪಾಲಿಟಿಕ್ಸ್ ಅಂಡ್ ಅದರ್ ಎಸ್ಸೇಸ್ (1923)-ಇವು ಮನೋವಿಜ್ಞಾನಕ್ಕೆ ಸಂಬಂಧಿಸಿದ ಇವನ ಪ್ರಮುಖ ಕೃತಿಗಳು.
ಮನೋವಿಜ್ಞಾನ ಹಾಗೂ ಮಾನವಶಾಸ್ತ್ರಗಳಿಗೆ ಸಲ್ಲಿಸಿದ ಸೇವೆಗಾಗಿ ಇವನಿಗೆ ಅನೇಕ ಗೌರವ ಪ್ರಶಸ್ತಿಗಳು ದೊರಕಿವೆ. ಈತ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾಗಿದ್ದ. ಇವನನ್ನು ಫೋಕ್‍ಲೋರ್ ಸೊಸೈಟಿಯ ಅಧ್ಯಕ್ಷನಾಗಿ (1920-21), ರಾಯಲ್ ಆಂತ್ರೊಪಾಲಜಿಕಲ್ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷನಾಗಿ (1921-22) ಆಯ್ಕೆಮಾಡಿ ಗೌರವಿಸ ಲಾಯಿತು. ಸೇಂಟ್ ಆಂಡ್ರೂಸ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾಲ ಯಗಳು ಇವನಿಗೆ ಗೌರವ ಪದವಿ ನೀಡಿವೆ.	
(ಪಿ.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ